ಹೆಸರು ಹೊಳೆಯುತ್ತಿಲ್ಲ – ಬೇಕಾಗಿಲ್ಲ, ಇದು ಕಥೆಯಲ್ಲ.

“ಲೈಫು ಇಷ್ಟೆನೆ” ಕೊನೆಯ ಶೋ ನೋಡಿಕೊಂಡು ಸಾಗರ್ ಥಿಯೇಟರನಿಂದ ಹೊರ ಬರುವ ಹೊತ್ತಿಗೆ ಮಳೆ ಬರುವ ಹಾಗಿತ್ತು. ಗಾಂಧೀನಗರದ ರಸ್ತೆಗಳನ್ನು ದಾಟಿ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಕಡೆಗೆ ನಡೆಯುತ್ತಿರಬೇಕಾದರೆ ಸಣ್ಣಗೆ ಶುರುವಿಟ್ಟುಕೊಂಡ ಗಾಳಿ ಮತ್ತು ಮಳೆಯ ಹನಿಗಳು. ನವೆಂಬರ್ ತಿಂಗಳ ಪ್ರಾರಂಭದಲ್ಲಿ ಬೆಂಗಳೂರಲ್ಲಿ ಮಳೆ ಸಾಮಾನ್ಯ. ಇಂದೇಕೋ ಬೆಳಗ್ಗಿನಿಂದಲೇ ಕಣ್ಣಮುಚ್ಚಾಲೆಯಾಡುತ್ತಿತ್ತು.

ಬಸ್ ಸ್ಟಾಂಡ್ ತಲುಪಿ 356N ವಜ್ರ ಹತ್ತಿ  ಹುಸ್ಕೂರುಗೇಟಿಗೆ ಟಿಕೇಟ್ ತೆಗೆದುಕೊಂಡಾಗ ಗಡಿಯಾರ 10 ಗಂಟೆ ತೋರಿಸುತ್ತಿತ್ತು. ಬಸ್ಸಿನ ಕಪ್ಪು ಗಾಜುಗಳು ಹೊರಗಡೆಯ ಪ್ರಪಂಚವನ್ನು ಒಳಗಿರುವವರಿಂದ ಮರೆಮಾಚಿತ್ತು. ಸಪ್ನ ಬುಕ್ ಸ್ಟೋರ್ ನಿಂದ ಕೊಂಡ ತೇಜಸ್ವಿಯವರ ‘ಹುಲಿಯೂರಿನ ಸರಹದ್ದು’ ಬಿಡಿಸಿ ನಿಂತಲ್ಲಿಯೇ
ಓದತೊಡಗಿದೆ.

“ವೀರಸಂದ್ರ – ಯಾರ್ರೀ ಇಳ್ಕೊಳಿ” ಕಂಡಕ್ಟರ್ ನ ಧ್ವನಿ ಕೇಳಿ ಇಳಿಯಲು ತಯಾರಾದೆ. ಮುಂದಿನ ಸ್ಟಾಪು ಹುಸ್ಕೂರುಗೇಟು. ಬಸ್ಸಿಳಿದು ಎ.ಪಿ.ಎಂ.ಸಿ. ಮಾರ್ಕೆಟ್ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದೆ. ಸಮಯ ಹನ್ನೊಂದೂವರೆ. ಇಂದ್ಯಾಕೋ ರಸ್ತೆ ನಿರ್ಜನವಾಗಿತ್ತು. ಶನಿವಾರದ ರಾತ್ರಿಯಾದ್ದರಿಂದಲೋ ಏನೋ. ರಾತ್ರಿಯ ವೇಳೆ ನಾನ್ಯಾವತ್ತೂ ಈ ರಸ್ತೆಯಲ್ಲಿ ನಡೆದು ಬಂದಿರಲಿಲ್ಲ. ನಾನು ನಡಿಗೆಯ ವೇಗ ಹೆಚ್ಚಿಸಿದೆ. ಮಳೆ ಹನಿಗಳೂ ನಾವೇನೂ ಕಮ್ಮಿಯಿಲ್ಲವೆಂಬಂತೆ ಜೋರಾಗಿ ಸುರಿಯತೊಡಗಿದವು. ಜಿಟಿ ಜಿಟಿ ಮಳೆ, ತಣ್ಣನೆಯ ಕುಳಿರ್ಗಾಳಿಯಿಂದಾಗಿ ಬೆನ್ನು ಹುರಿಯ ಮೇಲೆ ಮಂಜುಗಡ್ಡೆ ಸವರಿದಂತಾಗಿ ಚಳಿಯಿಂದ ನಡುಗುತ್ತಿದ್ದೆ.

ಮೊದಲ 100 ಮೀಟರ್ ದೂರ ಬಿಟ್ಟರೆ ಹುಸ್ಕೂರು ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಬಲ ಬದಿಯಲ್ಲೊಂದು ತೆಂಗಿನ ತೋಟ. ಜನರು ಮಾತನಡಿಕೊಳ್ಳುವ ಪ್ರಕಾರ ತೆಂಗಿನ ತೋಟದ ಓನರ್ ಎಲ್ಲೋ ವಿದೇಶದಲ್ಲಿರುವುದಂತೆ. ತುಂಬಾ ದುಡ್ಡಿದೆಯಂತೆ. ಜಾಗದ ಮೇಲೆ ಏನೋ ವಿವಾದವಿದೆಯಂತೆ. ಅದಕ್ಕೆ ಯಾರೂ ತೋಟ ನೋಡಿಕೊಳ್ಳುತ್ತಿಲ್ಲ, ಏನೋ. ಆದರೆ ಹಾಳು ಬಿದ್ದಿದ್ದಂತೂ ನಿಜ. ಒಳಗೆಲ್ಲಾ ಕಳೆಗಿಡಗಳು ತುಂಬಿ ಹಗಲಿನಲ್ಲೂ ದಟ್ಟವಾಗಿ ಅಬೇಧ್ಯ ಕಾಡಿನಂತೆ ಕಾಣಿಸುತ್ತದೆ. ಒಳಗೊಂದು ಹಾಳು ಬಿದ್ದ ದೊಡ್ಡ ಮನೆ ಬೇರೆ. ಸಿನಿಮಾದಲ್ಲಿ ಬರುವ ದೆವ್ವದ ಬಂಗಲೆಯಂತೆ. ರಸ್ತೆಯ ಎಡ ಬದಿಗೆ ಯಾರೋ ಬೇಲಿ ಹಾಕಿಟ್ಟ ಖಾಲಿ ಸೈಟುಗಳು.

ಮಳೆ ಜೋರಾಯಿತು. ಬೀಸುತ್ತಿದ್ದ ಗಾಳಿಯೂ ಕೂಡ. ಪುಸ್ತಕ ಒದ್ದೆಯಾಗದಂತೆ ಪ್ಲಾಸ್ಟಿಕ್ ಕವರೊಳಗಿತಟ್ಟು ಎದೆಗವಚಿಕೊಂಡೆ. ಅರ್ಧ ಗಂಟೆ ಹಿಂದೆ ಓದಿದ್ದ ತೇಜಸ್ವಿಯವರ ‘ಲಿಂಗ ಬಂದ’ದ ಕಿಟ್ಟಿ ಮತ್ತು ಸುಭದ್ರೆಯ ಮನಸ್ಥಿತಿಗೂ, ಏ ನಿರ್ಜನ ರಸ್ತೆಯಲ್ಲಿ ರಾತ್ರಿ 11.45 ಕ್ಕೆ ಹೆಜ್ಜೆ ಹಾಕುತ್ತಿರುವ ನನ್ನ ಮನಸ್ಥಿತಿಗೂ ಏನೂ ವ್ಯತ್ಯಾಸವಿರಲಿಲ್ಲ. ಭಯವೆನಿಸಿತು. ಕತ್ತಲ ಸಾಮ್ರಾಜ್ಯದ ಹೆದ್ದರಿಯಂತಿದ್ದ ರಸ್ತೆಯಲ್ಲಿ ಹಣ್ಣು ಹೇರಿಕೊಂಡಿದ್ದ ಲಾರಿಯೊಂದು ಫ್ರುಟ್ ಮಾರ್ಕೆಟ್ ನ ಕಡೆಗೆ ನಿಧಾನವಾಗಿ ಹೋಯ್ತು. ಕೈ ಹಿಡಿದರೂ ಡ್ರೈವರ್ ನಿಲ್ಲಿಸಲಿಲ್ಲ. ಇಂದೇಕೋ ದಿನ ಸರಿಯಿಲ್ಲ. ಸಣ್ಣದಾಗಿ ಹುಟ್ಟಿದ ಭಯದ ಅಲೆ ಮನದಾಳದಲ್ಲೆಲ್ಲೋ ನಿಧಾನವಾಗಿ ಎದ್ದೆದ್ದು ಭೋರ್ಗರೆಯತೊಡಗಿದಂತೆ ಅನುಭೂತಿ.

ಯಾರ್ಯಾರೋ ಹೇಳಿದ ಮಾರ್ಕೆಟ್ ರಾಜನ ವಿಚಿತ್ರ ಖಯಾಲಿಯ ಕಥೆಗಳು : ಮಾರ್ಕೆಟ್ ರಾಜ ಹಣ್ಣು ಮಾರುಕಟ್ಟೆಯ ಸುತ್ತ ಅಡ್ಡಾಡುತ್ತಾನಂತೆ, ರಾತ್ರಿಯಿಡೀ ಕುಡಿದು ಬೈಕ್ ಓಡಿಸುತ್ತಾನಂತೆ. ಒಂಟಿಯಾಗಿ ಯಾರಾದರೂ ಸಿಕ್ಕರೆ ಚಾಕುವಿನಲ್ಲಿ ಹೆದರಿಸಿ ಪರ್ಸ್,ಮೊಬೈಲ್ ಕೀಳುತ್ತಾನಂತೆ, ಕೊಡದಿದ್ದರೆ ಚುಚ್ಚಿಯೇ ಬಿಡುತ್ತಾನಂತೆ. ಹಿಂದೆಲ್ಲೋ ಓದಿದ್ದ ರಿಪ್ಪರ್ ಚಂದ್ರನ್ ನ ಕೊಲೆಯ ಕಥೆಗಳು ಎಲ್ಲಾ ನೆನಪಾಗಿ ತಣ್ಣಗಿನ ಮಳೆಯಲ್ಲೂ ಮೈ ಬೆವರತೊಡಗಿತು. ನಡಿಗೆಯ ವೇಗ ತನ್ನಿಂತಾನೆ ಹೆಚ್ಚಾಯಿತು.

ರಸ್ತೆಯ ತಿರುವಿನಲ್ಲೊಂದು ಯಾವುದೋ ಟ್ರಸ್ಟ್ ನಡೆಸುವ ಸ್ವಯಂ ಸೇವಾ ಕೇಂದ್ರವಿದೆ. ಹೊರಗೆ ರಸ್ತೆಗೆ ಕಾಣಿಸುವುದು ದೊಡ್ಡದಾದ ಗೇಟು ಮಾತ್ರ. ಯಾಕೋ ಗೊತ್ತಿಲ್ಲ. ಆ ಗೇಟನ್ನು ನಾನು ಹಗಲಿನಲ್ಲೂ ಓಡಾಡಬೇಕಾದರೆ ಕುತೂಹಲದಿಂದ ದಿಟ್ಟಿಸುತ್ತಿರುತ್ತೇನೆ. ಇವತ್ಯಾಕೋ ಗೇಟಿನ ಹಿಂದೆ ಕತ್ತಲಲ್ಲಿ ಅಸ್ಪಷ್ಟವಾಗಿ ಯಾರೋ ಕೊಡೆ ಹಿಡಿದು ನಿಂತಂತೆ, ಗೇಟು ತೆರೆದುಕೊಂಡಂತೆ, ಆ ಆಕ್ರಿತಿ ನನ್ನನ್ನೇ ಹಿಂಬಾಲಿಸಿಕೊಂಡು ಬಂದಂತೆಲ್ಲಾ ಅನಿಸತೊಡಗಿತು. ನಿಜವಾಗಿಯೂ ಯಾರಾದರೂ ಬರುತ್ತಿದ್ದರೋ ಅಥವಾ ಮನಸ್ಸಿನೊಳಗಿನ ಭಯ ಹೆತ್ತ ಬೇಡದ ಕೂಸೋ ದೇವರೇ ಬಲ್ಲ. ಎದೆಯೊಳಗೆ 160 kmph ವೇಗದಲ್ಲಿ ರೈಲು ಇಂಜಿನ್ ಹಾದು ಹೋದಂತೆ ಢವಢವ. I was almost running ಓಡತೊಡಗಿದೆ. ದೂರದಲ್ಲಿ ಒಂಟಿ ದೀಪದ ಸಣ್ಣದೊಂದು ಬೆಳಕು ಕಾಣುವವರೆಗೂ.

ಬೆಳಕು ಹತ್ತಿರ ಬಂದಂತೆ ಸ್ಪಷ್ಟವಾಗತೊಡಗಿತು – ಬೈಕಿನ ಹೆಡ್ ಲೈಟ್. ಶರತ್ ನ ಹೋಂಡಾ, ನನ್ನನ್ನೇ ಹುಡುಕಿಕೊಂಡು.
ಜೀವ ಬದುಕಿದೆಯಾ – Yes… ಬದುಕಿದೆ.

ಇನ್ನೂ ಬೆವರುತ್ತಿದ್ದೇನೆ. ಮನೆಗೆ ಬಂದು ಒಂದು ಗಂಟೆಯಾಯಿತು. ಮಳೆ ಕಡಿಮೆಯಾಗಿಲ್ಲ. ಮುಂದಿರುವ ನೀಲಗಿರಿ ಮರಗಳಿಂದ ಬೀಳುತ್ತಿರುವ ಹನಿಗಳ ರಭಸ ಕಡಿಮೆಯಾಗಿಲ್ಲ, ಯಾಕೊ ಗೊತ್ತಿಲ್ಲ – ಮನದೊಳಗಿನ ಭಯವೂ ಸಹ.

Advertisement

Posted on November 6, 2011, in Kannada, Lonesome thoughts. Bookmark the permalink. 6 Comments.

  1. OMG!!!…Like the way you expressed your experience bro…

  2. Awesome write up dude….

  3. Thanks Brother… Thank you Jo…

  4. Bhaktavatsala KS

    Innmale ratri otthu obre odadbedi… :-)

  5. ayyo maga naan yeno aytu andkonde, yenu aglilva bidu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.